ಗೋಪಿ ಬಾಳಿಗಾ ಕಾಲೇಜಿನಲ್ಲಿ ಬಿ.ಎ ಮಾಡುತ್ತಿರುವಾಗಲೇ ನನಗೆ ಪರಿಚಿತ.ಬಿ.ಎಸ್ಸಿ ವಿದ್ಯಾರ್ಥಿಗಳ ವರೆಗೂ ಆತನ ಸ್ನೇಹದ ಉದ್ದ ಕೈಗಳು ಚಾಚಿಕೊಂಡಿದ್ದವು.ಬಿ ಎಡ್ ನಲ್ಲಿ ಆತನೊಡನೆ ಒಂದೇ ತರಗತಿಯಲ್ಲಿ ಕಳೆಯುವ ಅವಕಾಶ ದೊರೆಯಿತು. ಗೋಪಿಗೆ ಕ್ರಿಕೆಟ್ ಹುಚ್ಚಿತ್ತು. ನಾವೆಲ್ಲ ಸಮಾನ ಮನಸ್ಕರು ಬಿ. ಎಡ್ ಕಾಲೇಜಿನ ಕ್ರಿಕೆಟ್ ತಂಡ ಕಟ್ಟಿದ್ದೆವು. ಕೊಪ್ಪಿಕರ್ ಟ್ರೋಫಿ. ದೀಪಕ್ ಟ್ರೋಫಿಯಂತಹ ಅಂತರ ಕಾಲೇಜು ಮಂದ್ಯಾಟಗಳಲ್ಲಿ ನಮ್ಮ ಬಿ ಎಡ್ ಕಾಲೇಜು ಭಾಗವಹಿಸಿದ್ದು ಅದೇ ಪ್ರಥಮ ಮತ್ತು ಅದೇ ಕೊನೆ. ಆಗ ಗೋಪಿ ಆರಂಭಿಕ ಆಟಗಾರನಾಗಿದ್ದ. ಬದುಕಿನ ಇನಿಂಗ್ಸ್ ನ್ನು ಆತ ಬೇಗ ಮುಗಿಸಿದ. ಕೆಲಸ ಗೋಪಿಯ ಸಾಮರ್ಥ್ಯವಾಗಿತ್ತು.ಆತ ಕೆಲಸವನ್ನು ಧರ್ಮವೆಂಬಂತೆ ಆಚರಿಸುತ್ತಿದ್ದ. ಕೆಲಸ ಆತನ ದೌರ್ಬಲ್ಯವಾಗಿತ್ತು ಕೂಡಾ-ಆತ ಕೆಲಸವನ್ನು ತನಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ.
ಆತನ ಕಳೆಬರದಲ್ಲಿ ಪ್ರೀತಿಯ ಗೋಪಿಯನ್ನು ಗುರುತಿಸಲು ನನಗೆ ಸಾಧ್ಯವಾಗಲಿಲ್ಲ. ಗೋಪಿ ಅಲ್ಲಿರಲಿಲ್ಲ..ಮನೆಯವರು, ಸ್ನೇಹಿತರು ಮತ್ತು ಆತನ ಪ್ರೀತಿಯ ಕೆಲಸದ ಜೊತೆಗಿದ್ದ.
ಗೋಪಿಯ ಕುರಿತು ಮಂಗಳೂರು ಡಯಟ್ ನ ಆತನ ಸಹದ್ಯೋಗಿ ಶ್ರೀಮತಿ ಸುಮಂಗಲಾ ನಾಯಕರು ಬರೆದ ಪುಟ್ಟ ನುಡಿನಮನ ಜೊತೆಗಿದೆ.
ಉದಯ ಗಾಂವಕಾರ
ಮರೆಯಾದ ಶಿಕ್ಷಣ ಇಲಾಖೆಯ ಅನರ್ಘ್ಯ ರತ್ನ ಗೋಪಿನಾಥ ಕಲಭಾಗ
ಆತ್ಮೀಯರ ನಡುವೆ ಗೋಪಿ ಎಂದೇ ಕರೆಯಿಸಿಕೊಳ್ಳುತ್ತಿದ್ದ, ಮಂಗಳೂರು ಡಯಟ್‍ನ ಉಪನ್ಯಾಸಕರಾದ ಗೋಪಿನಾಥ ಎನ್ ಕಲಭಾಗ್ ಇದೇ ತಿಂಗಳಿನ 19 ನೇ ತಾರೀಕಿನಂದು ತೀರಿಕೊಂಡರು. ಕುಮಟಾ ತಾಲೂಕಿನ ಕಲಭಾಗದ ನೀಲಕಂಠ ಕಲಭಾಗ ಹಾಗೂ ಸಿಂಧು ದಂಪತಿಗಳ ಕಿರಿಯ ಮಗನಾಗಿ ಜನಿಸಿದ ಗೋಪಿ ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪೋರೈಸಿದ್ದು ಕುಮಾಟಾದಲ್ಲಿ. ಮೈಸೂರು ವಿಶ್ವವಿಧ್ಯಾನಿಲಯದಿಂದ ಸ್ನಾತಕೋತ್ತರ ಹಾಗೂ ಎಮ್.ಇಡಿ ಪದವಿಯನ್ನು ಪಡೆದು ಕೊಲಾರದ ಚಿಂತಾಮಣಿಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಎರಡು ವರ್ಷಗಳ ಕಾಲ ಅಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 1999ರಲ್ಲಿ ಗೆಜೆಟಿಡ್ ಪ್ರೋಭೇಷನರಿ ಅಧಿಕಾರಿಯಾಗಿ ಆಯ್ಕೆಯಾಗಿ ಮಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾದರು. ಡಯಟ್ ಮಂಗಳೂರು ಗೋಪಿಯ ಕಾರ್ಯಕ್ಷೇತ್ರವಷ್ಟೇ ಆಗಿರಲಿಲ್ಲ, ಜೀವಿತದ ಕೊನೆಯವರೆಗೂ ಅವರ ಉಸಿರೇ ಆಗಿತ್ತು. ಶೈಕ್ಷಣಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿ ಮಂಗಳೂರು ಡಯಟ್ ನಲ್ಲಿ ಇವರು ಸಲ್ಲಿಸಿದ ಸೇವೆ ಅನುಪಮವಾದುದು. ಈಗಿನ ಉಡುಪಿ ಜಿಲ್ಲೆಯನ್ನೂ ಒಳಗೊಂಡ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲಿ ್ಲಕಂಪ್ಯೂಟರ್ ಶಿಕ್ಷಣ ಅಳವಡಿಸಲು ಗೋಪಿ ಸಾಕಷ್ಟು ಶ್ರಮವಹಿಸಿದವರು. ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂಧಿಸಿದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕದ ತುಂಬಾ ಓಡಾಡಿದ್ದರು. ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಪಠ್ಯ ಪುಸ್ತಕಗಳ ರಚನಾಕಾರ್ಯದಲ್ಲಿ ಹಾಗೂ ಶಾಲಾ ಹಂತದ ವಿದ್ಯುನ್ಮಾನ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಗೋಪಿನಾಥರ ಸೇವೆಯನ್ನು ಶಿಕ್ಷಣ ಇಲಾಖೆ ಪಡೆದುಕೊಂಡಿತ್ತು. ಕಂಪ್ಯೂಟರ್ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ಅಳವಡಿಸುವಲ್ಲಿ ಗೋಪಿನಾಥರು ತೋರಿದ ಅರ್ಪಣಾ ಮನೋಭಾವಕ್ಕೆ ಪ್ರತಿಯಾಗಿ ಇಂಟೆಲ್ ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡಾ ಲಭಿಸಿತ್ತು.
ವೃತ್ತಿಪರತೆಗೆ ಗೋಪಿನಾಥರು ಇನ್ನೊಂದು ಹೆಸರಾಗಿದ್ದರು. ದಕ್ಷಿಣ ಕನ್ನಡದ ಶಿಕ್ಷಕ ಸಮೂಹದಲ್ಲಿ ನಡೆದಾಡುವ ಕಂಪ್ಯೂಟರ್ ಎಂದೇ ಹೆಸರುವಾಸಿಯಾಗಿದ್ದ ಗೋಪಿನಾಥರು ಜಿಲ್ಲೆಯ ಕಂಪ್ಯೂಟರ್ ಶಿಕ್ಷಣವಿರುವ 190ಶಾಲೆಗಳ ಹೆಸರು, ಆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಹೆಸರು ಇತ್ಯಾದಿ ವಿವರಗಳನ್ನು ಯಾವಾಗ ಬೇಕಾದರೂ ಸ್ಮರಿಸಿಕೊಳ್ಳಬಲ್ಲಂತಹ ನೆನಪಿನ ಶಕ್ತಿಯನ್ನು ಹೊಂದಿದ್ದರು. ಸ್ನೇಹಕ್ಕೆ ಮತ್ತು ಸಂಬಂಧಗಳಿಗೆ ಬೆಲೆಕೊಡುತ್ತಿದ್ದ ಗೋಪಿ ಮಿತ ಭಾಷಿಯಾಗಿದ್ದರು. ಸರಕಾರಿ ಕೆಲಸವನ್ನು ಗೋಪಿ ಧರ್ಮವೆಂಬಂತೆ ಆಚರಿಸಿದರು.ಕೆಲಸವನ್ನು ತಮಗಿಂತಲೂ ಹೆಚ್ಚಾಗಿ ಪ್ರೀತಿಸಿದರು.ತಮ್ಮ ನಲವತ್ತ್ಮೂರನೇ ವಯಸ್ಸಿನಲ್ಲೇ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗಿ ಇಹಲೋಕದ ವ್ಯವಹಾರಗಳನ್ನು ಮುಗಿಸಿದ ಗೋಪಿನಾಥರ ಸಾವಿನೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕ ಬಂಧುಗಳು ಒಬ್ಬ ಶ್ರೇಷ್ಠ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದಾರೆ, ಶಿಕ್ಷಣ ಇಲಾಖೆಯು ತನ್ನ ಕಿರೀಟದಲ್ಲಿದ್ದ ಅನಘ್ರ್ಯ ರತ್ನವೊಂದನ್ನು ಕಳೆದುಕೊಂಡಿದೆ. ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ!
ಸುಮಂಗಲಾ ನಾಯಕ
ಡಯಟ್ ಮಂಗಳೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ