ಜುಲೈ 26, 2013

ಮಕ್ಕಳ ಮುಖದಲ್ಲಿನ ನಗುವ ಹೆಕ್ಕುತ್ತಾ..

       ಉರುಹೊಡೆಯುವುದನ್ನೇ ಕಲಿಕೆ ಮತ್ತು ಉದ್ಯೋಗ ಹಿಡಿಯುವುದೇ ಶಿಕ್ಷಣದ ಪರಮೋಚ್ಛ ಗುರಿ ಎಂದು ಭಾವಿಸಿರುವ ಸಮಾಜದಲ್ಲಿ ಮಕ್ಕಳು ಯಾರದೋ ಹೊರೆ ಹೊರುವ ಕೂಲಿಗಳಾಗುತ್ತಾರೆ.ಮಕ್ಕಳು ಕನಸುಕಾಣುವುದನ್ನು ನಿಲ್ಲಿಸುತ್ತಾರೆ ; ಅವರ ಪರವಾಗಿ ಪಾಲಕರು ಕನಸು ಕಾಣುತ್ತಾರೆ.ಶಾಲೆಯಿಂದ ಟ್ಯೂಷನ್ ತರಗತಿಗೆ,ಟ್ಯೂಷನ್ ತರಗತಿಯಿಂದ ಡ್ರಾಯಿಂಗ್ ಕ್ಲಾಸಿಗೆ,ಡ್ರಾಯಿಂಗ್ ಕ್ಲಾಸಿನಿಂದ ಯೋಗ ತರಬೇತಿಗೆ ಓಡಾಡುತ್ತಾ ಮಕ್ಕಳು ಬಾಲ್ಯವನ್ನು ಸವೆಸುವುದನ್ನು ಕಂಡು ಪಾಲಕರು ಕೃತಾರ್ಥರಾಗುತ್ತಾರೆ.
   ಇಂತಹ ಕಾಲಘಟ್ಟದಲ್ಲಿಯೂ ಬೆಳ್ಳಿರೇಖೆಯೊಂದು ಗೋಚರಿಸುತ್ತಿದೆ.ಮಕ್ಕಳಿಗೂ ಕನಸುಗಳಿರುತ್ತವೆ ಮತ್ತು ಅವರ ಕನಸುಗಳಿಗೂ ಬಣ್ಣಗಳನ್ನು ಬಳಿಯಬಹುದು ಎಂಬ ನಂಬಿಕೆಯಿರುವ ವ್ಯಕ್ತಿಗಳಿದ್ದಾರೆ.ಅಂತವರ ಸಂಖ್ಯೆ ಕಡಿಮೆಯೇ ಇರಬಹುದು,ಆದರೆ,ಕಡಿಮೆ ಮಹತ್ವದ್ದಲ್ಲ.ತಮ್ಮ ಭುಜದ ಮೇಲೆ ಕುಳಿತ ಮಕ್ಕಳ ಕಣ್ಣುಗಳ ಮೂಲಕವೇ ದಿಗಂತವನ್ನು ದಿಟ್ಟಿಸಬಲ್ಲ ಶಿಕ್ಷಕರು ನಮ್ಮಲ್ಲಿದ್ದಾರೆ.ಅವರು ಮಕ್ಕಳ ಪ್ರತಿಭೆಗೆ ವೇದಿಕೆಯಾಗುತ್ತಾರೆ,ಬಣ್ಣಕ್ಕೆ ಕ್ಯಾನ್ವಾಸ್ ಆಗುತ್ತಾರೆ,ಮಕ್ಕಳ ಅಭಿವ್ಯಕ್ತಿಯ ಮೂಲಕವೇ ಉಸಿರಾಡುತ್ತಾರೆ.ಮಕ್ಕಳನ್ನು ಮಷಿನ್ನುಗಳಾಗಿಸುವ ಪ್ರಯತ್ನವನ್ನು ಮೆಟ್ಟಿನಿಂತು ಅವರನ್ನು ಮನುಷ್ಯರನ್ನಾಗಿಸುತ್ತಾರೆ.
    ಮಚ್ಚಟ್ಟು ಶಾಲೆ ಹೊರತರುತ್ತಿರುವ ಪ್ರತಿಬಿಂಬ ಎಂಬ ಕೈ ಬರೆಹದ ಪತ್ರಿಕೆ ಮಕ್ಕಳನ್ನು ಮನುಷ್ಯರನ್ನಾಗಿಸುವ  ಒಂದು ವಿನಮ್ರ ಪ್ರಯತ್ನ.ಮಕ್ಕಳ ಕನಸುಗಳೇ ಈ ಪತ್ರಿಕೆಯ ಆತ್ಮ.ಶಾಲೆಯ ಶಿಕ್ಷಕವೃಂದ ತುಂಬು ಖುಷಿಯಿಂದ ಮಕ್ಕಳ ಮುಖದಲ್ಲಿ ಕಾಣಿಸುವ ಪ್ರತಿ ನಗುವನ್ನೂ ಹೆಕ್ಕಿ ಹೆಕ್ಕಿ ಪೋಣಿಸಿದಂತೆ ಈ ಪತ್ರಿಕೆಯ ಪುಟಗಳು ನನಗೆ ಕಾಣಿಸುತ್ತವೆ.ಪತ್ರಿಕೆಯ ಮೂಲಕ  ಮಕ್ಕಳು ತಮ್ಮದೇ ಕಲ್ಪನೆಗಳ ಸೀಮೋಲಂಘನಗೈಯುತ್ತಾ ಮತ್ತೆ ಮತ್ತೆ ಮಗುತನಕ್ಕೆ ಮರಳುತ್ತಲೇ ಇರಲಿ ಎಂಬುದು ನನ್ನ ಹಾರೈಕೆ.
  ಶುಭಾಶಯಗಳು.
ಉದಯ ಗಾಂವಕಾರ

26 ಜುಲೈ 2013

1 ಕಾಮೆಂಟ್‌:

  1. ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿಯಾಯಿತು.. ನಿಮ್ಮಿಂದ ನಾನೂ ಸ್ಫೂರ್ತಿಗೊಂಡಿದ್ದೇನೆ. ಧನ್ಯವಾದಗಳು
    --ಸಚಿನ್ ಕುಮಾರ ಹಿರೇಮಠ
    ಶಿಕ್ಷಕರು,ಸ.ಹೊ.ಪ್ರಾ.ಶಾಲೆ.ಕೊಡಚಿ, ತಾ.ಜೇವರ್ಗಹಿ, ಜಿ.ಗುಲ್ಬರ್ಗಾ
    www.nammakodachishale.blogspot.in

    ಪ್ರತ್ಯುತ್ತರಅಳಿಸಿ